ಮರುಭೂಮಿ
ಅತಿ ಶುಷ್ಕ ಹವೆ ಇರುವ ಮತ್ತು ಅತ್ಯಲ್ಪ ಪ್ರಮಾಣದಲ್ಲಿ ಸಸ್ಯಗಳು ಬೆಳೆದಿರುವ ಬರಡು ಪ್ರದೇಶ (ಡೆಸರ್ಟ್). ಇಲ್ಲಿ ಮಳೆಯ ಪ್ರಮಾಣ ಅತ್ಯಲ್ಪವಾಗಿದ್ದು ನೀರಿನ ತೆವ ಬಲುಬೇಗ ಆವಿಯಾಗಿ ಹೋಗುತ್ತದೆ. ಆದ್ದರಿಂದ ವರ್ಷದ ಅಧಿಕ ಭಾಗದಲ್ಲಿ ಮಣ್ಣಿನಲ್ಲಿ ತೆವವೇ ಇರದೆ ಅದು ಒಣಗಿಯೇ ಇರುವುದು. ಅಲ್ಲದೆ ಬಿದ್ದ ಅಲ್ಪ ಸ್ವಲ್ಪ ಮಳೆಯೂ ಬಹಳ ಬಿರುಸಾಗಿ ಕೇವಲ ಕೆಲವೇ ಕ್ಷಣಗಳಲ್ಲಿ ಬೀಳುವುದರಿಂದ ಮಳೆನೀರು ರಭಸದಿಂದ ಹರಿದು ಭೂಮಿ ವಿಶೇಷವಾಗಿ ಸವೆದುಹೋಗುತ್ತದೆ. ಭೂಮಿಯಲ್ಲಿ ತೇವವೂ ಇಲ್ಲದೆ ಸಸ್ಯಗಳು ಅತಿ ವಿರಳವಾಗಿರುವುದರಿಂದ ಬೀಸುಗಾಳಿ ಭೂಮಿಯ ಸವೆತಕ್ಕೆ ಅತಿ ಮುಖ್ಯ ಕರ್ತೃವಾಗಿದೆ.

	ಮರುಭೂಮಿಗಳು ಕೇವಲ ಉಷ್ಣವಲಕ್ಕೆ ಸೀಮಿತವಾಗಿಲ್ಲ. ಅವು ಧ್ರುವಗಳ ಸುತ್ತ ಹರಡಿವೆ; ಮತ್ತು ಉನ್ನತ ಅಕ್ಷಾಂಶಗಳ ಪ್ರದೇಶಗಳಲ್ಲಿ ವ್ಯಾಪಿಸಿವೆ. ಉತ್ತರಧ್ರುವ ಮತ್ತು ದಕ್ಷಿಣಧ್ರುವ ಪ್ರದೇಶಗಳಲ್ಲಿ ಅತಿ ಶೈತ್ಯದಿಂದಾಗಿ ಮಂಜು ಹೆಪ್ಪು ಕಟ್ಟಿಕೊಂಡಿರುವ ಆರ್ಕ್‍ಟಿಕ್ ಮತ್ತು ಅಂಟಾರ್ಕ್‍ಟಿಕ್ ಎಂಬ ಹಿಮ ಮರುಭೂಮಿಗಳಿವೆ. 

	ಉಷ್ಣವಲಯದ ಮರುಭೂಮಿಗಳು ಸಮಭಾಜಕದಿಂದ ಸುಮಾರು 15 ಯಿಂದ 30 ವರಗಿನ ಉತ್ತರ ಮತ್ತು ದಕ್ಷಿಣ ಅಕ್ಷಾಂಶಗಳ ಪ್ರದೇಶವನ್ನು ಆಕ್ರಮಿಸಿ ಕೊಂಡಿವೆ. ಮೆಕ್ಸಿಕೋದ ವಾಯವ್ಯದಲ್ಲಿರುವ ಸೂನರಾನ್ ಮರುಭೂಮಿ ಕ್ಯಾಲಿಫೋರ್ನಿಯ ಮತ್ತು ಆರಿಜೋನಗಳ ಅಕ್ಕಪಕ್ಕದ ಪ್ರದೇಶಗಳು, ಉತ್ತರ ಆಫ್ರಿಕದ ಸಹರಾ, ಮಧ್ಯ ಪ್ರಾಚ್ಯದ ಅರೇಬಿಯ, ಭಾರತದ ರಾಜಸ್ಥಾನ ಥಾರ್ ಮರುಭೂಮಿ ಮತ್ತು ನೈಋತ್ಯ ಆಫ್ರಿಕದ ಕಲಹರಿ ಮರುಭೂಮಿಗಳು. ತೇವರಹಿತ ಗಾಳಿ ಈ ಪ್ರದೇಶಗಳ ಮೇಲೆ ಬೀಸುವುದೇ ಇವುಗಳ ಉತ್ಪತ್ತಿಗೆ ಕಾರಣ. ಈ ಮಾರುತಗಳು ಹೆಚ್ಚು ಒತ್ತಡ ಪ್ರದೇಶದಿಂದ ಬೀಸುವಾಗ ಮೇಲಿನಿಂದ ತಳಕ್ಕೆ ಇಳಿದು ತೇವವನ್ನು ಕಳೆದುಕೊಂಡು ಮಳೆಯನ್ನು ತರಲಾರದವಾಗಿದೆ. ಇಂಥ ಪ್ರದೇಶಗಳು ಸಾಧಾರಣವಾಗಿ ಭೂಖಂಡಗಳ ಪಶ್ಚಿಮ ಭಾಗಗಳಲ್ಲಿರುವುವು. 

	ಮರುಭೂಮಿಗಳು ವಿಸ್ತೀರ್ಣದಲ್ಲಿಯೂ ಎತ್ತರದಲ್ಲಿಯೂ ಅಲ್ಲದೆ ಇತರ ಮುಖ್ಯ ಮೇಲ್ಮೈಲಕ್ಷಣಗಳಲ್ಲಿಯೂ ವಿವಿಧವಾಗಿವೆ. ಇವುಗಳಲ್ಲಿ ಎರಡು ಮುಖ್ಯ ವಿಧಗಳಿವೆ. ಬೆಟ್ಟ ಮತ್ತು ಪರ್ವತಗಳಿಂದ ಆವೃತವಾಗಿರುವ ವಿಶಾಲವಾದ ಒಣಗಿರುವ ಕಣಿವೆಗಳು, ಶಿಲೆಗಳಿಂದ ಕೂಡಿದ್ದು ಅಲ್ಲಲ್ಲಿ ಮರಳಿನಿಂದ ತುಂಬಿದ ಹಳ್ಳಗಳನ್ನೊಳಗೊಂಡ ಪ್ರಸ್ಥಭೂಮಿಗಳು. 

	ಉಷ್ಣಪ್ರದೇಶದ ಮರುಭೂಮಿಗಳಲ್ಲಿ ಸಹರಾ ಮರುಭೂಮಿಯೇ ಅತಿ ದೊಡ್ಡದು. ಇದರ ವಿಸ್ತೀರ್ಣ 9,065,000 ಚಕಿಮೀ. ಇದು ಸಪಾಟವಾಗಿರದೆ ಕೆಲವು ಕಡೆಗಳಲ್ಲಿ ಸಮುದ್ರ ಮಟ್ಟದಿಂದ 135ಮೀ ಗಳಷ್ಟು ಕೆಳಗಿರುವುದು ಇತರೆಡೆಗಳಲ್ಲಿ ಸಮುದ್ರ ಮಟ್ಟದಿಂದ 3415ಮೀ ಗಳಷ್ಟು ಎತ್ತರದಲ್ಲಿದೆ. ಉತ್ತರ ಅಮೆರಿಕದ ಮರುಭೂಮಿಗಳ ಸ್ವಲ್ಪಭಾಗ ಪರ್ವತಗಳಿಂದ ಕೂಡಿದ್ದು ಹೆಚ್ಚಿನ ಭಾಗ ಸಮುದ್ರ ಮಟ್ಟಕ್ಕೆ ಸಮೀಪದಲ್ಲಿದೆ. ರಾಜಸ್ಥಾನದ ಮರುಭೂಮಿ ಸಮುದ್ರ ಮಟ್ಟದಿಂದ ಬಹಳ ಮೇಲಿದ್ದು ಕಲ್ಲು ಗುಡ್ಡ ಮತ್ತು ದಟ್ಟ ಕಣಿವೆಗಳಿಂದ ಕೂಡಿದೆ. ಮರುಭೂಮಿಯಲ್ಲಿ ಸುತ್ತಲೂ ಪರ್ವತಗಳಿದ್ದು ಮಧ್ಯೆ ಪಾತ್ರೆಯ ಹಾಗೆ ಹಳ್ಳ ದ್ದಲ್ಲಿ ಅದಕ್ಕೆ ಬೋಕೆಲ್ಸನ್ ಎಂದು ಹೆಸರು.

	ಮರುಭೂಮಿ ಕೇವಲ ಮರಳಿನಿಂದಲೇ ಕೂಡಿರುವುದೆಂಬ ಭಾವನೆ ಸರಿಯಲ್ಲ. ವಾಸ್ತವವಾಗಿ ಇದರಲ್ಲಿ ಮರಳುಪ್ರದೇಶ ಅತ್ಯಲ್ಪ; ಉತ್ತರ ಅಮೆರಿಕದ ಮರುಭೂಮಿಗಳಲ್ಲಿ ಶೇಕಡಾ 2ರಷ್ಟು ಸಹರಾ ಪ್ರದೇಶದಲ್ಲಿ ಶೇಕಡಾ 4ರಷ್ಟು ಮತ್ತು ಅರೇಬಿಯದಲ್ಲಿ ಶೇಕಡಾ 30ರಷ್ಟು ಭಾಗ ಮಾತ್ರ ಮರಳಿನಿಂದ ಕೂಡಿವೆ.
	
ಹವಾಗುಣ ವೈಪರೀತ್ಯಗಳಿಂದ ಕೂಡಿದ್ದು ಹಗಲು ಮತ್ತು ರಾತ್ರಿಗಳಲ್ಲಿಯ ಉಷ್ಣಗಳಲ್ಲಿ ಬಹಳ ಅಂತರವಿರುವುದು. ಅನೇಕ ಕಡೆಗಳಲ್ಲಿ ಹವೆ ಮಧ್ಯಾಹ್ನ ಸುಡುವಷ್ಟು ತೀವ್ರವಾಗಿದ್ದು ಬೆಳಗಿನ ಜಾವದಲ್ಲಿ ನೀರು ಹೆಪ್ಪುಗಟ್ಟುವಷ್ಟು ತಣ್ಣಗಿರುತ್ತದೆ. ಸಾಮಾನ್ಯವಾಗಿ ಆಕಾಶ ಮೋಡಗಳಿಲ್ಲದೆ ಸ್ವಚ್ಛವಾಗಿರುವುದು. ಬಿರುಸಾಗಿ ಅಪರೂಪಕ್ಕೆ ಬಿದ್ದಾಗ ಎತ್ತರ ಪ್ರದೇಶದಿಂದ ಮಣ್ಣಿನ ಕ್ಷಾರಗಳು ತಗ್ಗು ಪ್ರದೇಶಗಳಿಗೆ ಹರಿದು ಚೌಳಿನ ಶೇಕರಣೆಗಳಾಗುವುವು. 

ಮರುಭೂಮಿಯಲ್ಲಿ ಸಸ್ಯಗಳು ವಿರಳವಾಗಿದ್ದು ಬೂದು ಅಥವಾ ತಿಳಿಹಸುರು ಬಣ್ಣ ತಳೆದಿರುತ್ತವೆ. ಇವುUಳ ಎಲೆಗಳು ಬಹಳ ಸಣ್ಣಗೆ ಮೊನಚಾಗಿರುವುವು. ಇಲ್ಲವೆ ಮುಳ್ಳುಗಳಿಂದ ಕೂಡಿದ್ದು ಬೇರುಗಳು ಬಹಳ ಆಳದವರೆಗೂ ಹಬ್ಬಿರುವುವು. ಇವು ಬಹುವಾಗಿ ಕ್ಯಾಕ್‍ಟಸ್ ಅಥವಾ ಮೊಡುಕಳ್ಳಿಯಗುಂಪಿನವು.

	ಮರುಭೂಮಿಯಲ್ಲಿ ಪ್ರಾಣಿಗಳೂ ಬಲು ವಿರಳ. ಇವುಗಳಲ್ಲಿ ಕಾಂಗರೂ ಮುಂತಾದ ದೊಡ್ಡ ಸ್ತನಿಗಳು, ಬಿಲಗಳಲ್ಲಿ ವಾಸಿಸುವ ಸಣ್ಣ ಪ್ರಾಣಿಗಳು, ಉರಗಗಳು ಪಕ್ಷಿಗಳು ಮತ್ತು ಕೀಟಗಳು ಸೇರಿವೆ. 

	ದೊಡ್ಡ ದೊಡ್ಡ ನದಿಗಳು ಹರಿಯುವ ಮರುಭೂಮಿಗಳಲ್ಲಿ ಹೆಚ್ಚು ಜನವಾಸಿಸುವ ಸಾಧ್ಯತೆಗಳಿವೆ. ಉದಾಹರಣೆಗೆ ಈಜಿಪ್ಟ್, ಕ್ಯಾಲರಾಡೋ, ಇರಾಕ್ ಮತ್ತು ಇರಾನ್ ಸಿಂಧು ಮರುಭೂಮಿಗಳು. ಕೆಲವಡೆ ಮರುಭೂಮಿಗಳ ಮಧ್ಯದಲ್ಲಿ ಓಯಸಿಸ್ ಎಂಬ ಜಲಾಶಯಗಳಿದ್ದು ಜನಜೀವನಕ್ಕೆ ಅನುಕೂಲವಾಗಿರುವುವು. ಈಚೆಗೆ ಮರುಭೂಮಿಗಳಲ್ಲಿಯೂ ಖನಿಜನಿಕ್ಷೇಪಗಳು ಬಹಳ ಪ್ರಾಮುಖ್ಯಗಳಿಸಿವೆ. ಸಹರಾ ಮತ್ತು ವಾಯವ್ಯ ಕೆನಡದ ಮರುಭೂಮಿಗಳು ಕಲ್ಲೆಣ್ಣೆಗೂ ಇತರ ಕೆಲವು ಮರುಭೂಮಿಗಳು ಬಿಳಿಗಾರ, ಪೆಟ್ಲುಪ್ಪು ಮುಂತಾದ ಕ್ಷಾರನಿಕ್ಷೇಪಗಳಿಗೂ ಆಗರಗಳಾಗಿವೆ.
(ಎಂ.ಎಸ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ